ಕೇಂದ್ರೀಯ ಪಾಠಶಾಲೆ

ಸ್ಥಳದಿಂದ ಸ್ಥಳಕ್ಕೆ ವರ್ಗವಾಗಿ ಬರುವ ಕೇಂದ್ರ (ಭಾರತ) ಸರ್ಕಾರದ ಅಧಿಕಾರಿಗಳ ಮಕ್ಕಳ ಶಿಕ್ಷಣಕ್ಕಾಗಿ ದ್ವಿತೀಯ ವೇತನ ಆಯೋಗದ ಸಲಹೆಯಂತೆ ಕೇಂದ್ರ ಸರ್ಕಾರ ಭಾರತದ ಪ್ರಮುಖ ನಗರಗಳಲ್ಲಿ ಆರಂಭಿಸಿ ನಡೆಸುತ್ತಿರುವ ಪಾಠಶಾಲೆಗಳು (ಸೆಂಟ್ರಲ್ ಸ್ಕೂಲ್ಸ್). ಸದ್ಯದಲ್ಲಿ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ಸುಮಾರು 120ಕ್ಕೂ ಹೆಚ್ಚು ಉನ್ನತ ಪ್ರೌಢಶಾಲೆಗಳನ್ನು ನಡೆಸುತ್ತಿದೆ. ಇಲ್ಲಿ ಹಿಂದಿ ಅಥವಾ ಇಂಗ್ಲಿಷ್ ಶಿಕ್ಷಣ ಮಾಧ್ಯಮವಾಗಿದ್ದು ಈ ಎಲ್ಲ ಶಾಲೆಗಳಲ್ಲೂ ಏಕರೀತಿಯ ಪಠ್ಯಕ್ರಮಗಳನ್ನು ಅನುಸರಿಸಲಾಗುತ್ತಿದೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ನವದೆಹಲಿಯ ಪ್ರೌಢಶಿಕ್ಷಣದ ಕೇಂದ್ರೀಯ ಮಂಡಳಿ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್) ಏರ್ಪಡಿಸುವ ಅಖಿಲಭಾರತ ಉನ್ನತ ಪ್ರೌಢಶಾಲಾ ಪರೀಕ್ಷೆಗೆ ಕುಳಿತುಕೊಳ್ಳುವರು. ಇಲ್ಲಿನ ಶಿಕ್ಷಣದ ಮಟ್ಟ ಉತ್ತಮ ಸ್ಥಿತಿಯಲ್ಲಿದ್ದು ಇತರ ಶಾಲೆಗಳಿಗೆ ಆದರ್ಶವೆನಿಸುವಂತಿದೆ. ಈ ಶಾಲೆಗಳಲ್ಲಿ ಒಂದನೆಯ ತರಗತಿಯಿಂದ ಎಂಟನೆಯ ತರಗತಿಯವರೆಗೆ ಶುಲ್ಕ ಕೊಡಬೇಕಾಗಿಲ್ಲ. ಒಂಬತ್ತನೆಯ ತರಗತಿಯಲ್ಲಿ ತಿಂಗಳಿಗೆ 6 ರೂ., ಹತ್ತನೆಯ ತರಗತಿಯಲ್ಲಿ 7 ರೂ., ಹನ್ನೊಂದನೆಯ ತರಗತಿಯಲ್ಲಿ 8 ರೂ.-ಈ ರೀತಿಯ ಶುಲ್ಕವನ್ನು ವಿಧಿಸಲಾಗುವುದು. ಅನುಸೂಚಿತ ಜಾತಿಯ ಮತ್ತು ನಿಮ್ನವರ್ಗದ ವಿದ್ಯಾರ್ಥಿಗಳಿಗೆ ಶುಲ್ಕದಿಂದ ವಿನಾಯತಿ ಉಂಟು. ಸಾಮಾನ್ಯವಾಗಿ ಇವು ವಸತಿ ವಿದ್ಯಾಲಯಗಳಾಗಿವೆ. ಇಲ್ಲಿನ ಜೀವನದ ವೆಚ್ಚ ಸಾಧಾರಣ ವಿದ್ಯಾರ್ಥಿನಿಲಯಕ್ಕಿಂತ ಅಷ್ಟೇನೂ ಹೆಚ್ಚಾಗುವುದಿಲ್ಲ. ಬೇರೆ ಬೇರೆ ರೀತಿಯ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶಾವಕಾಶ ನೀಡುವಾಗ ಆದ್ಯತೆಯ ನಿಯಮವನ್ನು ಅನುಸರಿಸಲಾಗುವುದು. ರಕ್ಷಣಾ ಶಾಖೆಯನ್ನೊಳಗೊಂಡಂತೆ ಕೇಂದ್ರ ಸರ್ಕಾರದ ಸಿಬ್ಬಂದಿಯವರ ಮಕ್ಕಳಿಗೆ ಪ್ರವೇಶಾವಕಾಶಕ್ಕೆ ಆದ್ಯತೆಯುಂಟು. ಕೇಂದ್ರ ಸರ್ಕಾರದ ಸಹಾಯ ಧನದಿಂದ ನಡೆಯುತ್ತಿರುವ ಪೂರ್ಣ ಅಥವಾ ಅರ್ಧ ಸ್ವಯಮಾಡಳಿತ ಸಂಸ್ಥೆಗಳ ಸಿಬ್ಬಂದಿಯವರ ಮಕ್ಕಳಿಗೆ ದ್ವಿತೀಯ ಆದ್ಯತೆಯನ್ನೂ ಸಂಚಾರಿ ಮತ್ತು ಸ್ಥಳೀಯ ಜನತೆಯ ಮಕ್ಕಳಿಗೆ ತೃತೀಯ ಆದ್ಯತೆಯನ್ನೂ ನೀಡಲಾಗುವುದು.

	1968ರಲ್ಲಿ ಈ ಶಾಲೆಗಳಲ್ಲಿ ಸುಮಾರು 64,668 ಮಂದಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು. ಪ್ರತಿವರ್ಷವೂ ವಿದ್ಯಾರ್ಥಿ ಸಂಖ್ಯೆ ಶೇ.13ರಂತೆ ಹೆಚ್ಚುತ್ತ ಹೋಗುತ್ತಿದೆ. ಈ ಶಾಲೆಗಳ ಕಟ್ಟಡ, ಸಾಮಾನು ಸರಬರಾಜು, ಉಪಕರಣಾದಿಗಳು, ಅಧ್ಯಾಪಕರು, ಆಡಳಿತ ನಿರ್ವಹಣೆ-ಇವೆಲ್ಲ ಉತ್ತಮ ಮಟ್ಟದವೆಂದು ಹೆಸರಾಗಿವೆ. ಈ ಶಾಲೆಗಳನ್ನು ನಡೆಸಲು ಬೇಕಾಗುವ ಸಂಪೂರ್ಣ ವೆಚ್ಚವನ್ನು ಕೇಂದ್ರ ಸಚಿವಾಲಯ ವಹಿಸಿಕೊಳ್ಳುತ್ತಿದೆ.							
	  *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ